ಗುರುದೇವರ ಭಾರತದ ಭಕ್ತಾದಿಗಳಿಗೆ ಸ್ಫೂರ್ತಿ ಹಾಗೂ ಆತ್ಮವಿಶ್ವಾಸವನ್ನುಂಟುಮಾಡುವ ಪ್ರಾರ್ಥನೆಗಳ ಒಂದು ಸಂದೇಶ – ಸ್ವಾಮಿ ಚಿದಾನಂದ ಗಿರಿ ಅವರಿಂದ

24 ಏಪ್ರಿಲ್, 2021

ಪ್ರೀತಿಪಾತ್ರರೇ,

ನಮ್ಮ ನಲ್ಮೆಯ ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕ ನಿಮ್ಮಲ್ಲೆಷ್ಟೊಂದು ಮಂದಿಗೆ ತಟ್ಟುತ್ತಿರುವುದನ್ನು ನೋಡುತ್ತಿದ್ದೇನೆ. ಭಗವಂತನ ಉಜ್ವಲ ಪ್ರಕಾಶ ಹಾಗೂ ಆಶೀರ್ವಾದಗಳು ನಿಮ್ಮನ್ನು ಸುತ್ತುವರಿದು ಕಾಯುತ್ತಾ ಹಾಗೂ ನಮ್ಮ ವಸುಧೈವ ಕುಟುಂಬವನ್ನು ಪೀಡಿಸುತ್ತಿರುವ ಈ ವಿನಾಶಕಾರಿಗೆ ಒಂದು ಅಂತ್ಯವನ್ನು ಬೇಗನೆ ಹಾಡಲಿ ಎಂದು ದೃಶ್ಯೀಕರಿಸುತ್ತ ನಾನು ನಿಮ್ಮೆಲ್ಲರನ್ನೂ ನನ್ನ ಗಾಢವಾದ ಪ್ರಾರ್ಥನೆಗಳಲ್ಲಿ ಇರಿಸಿಕೊಂಡಿದ್ದೇನೆ ಎಂದು ನಿಮಗೆ ತಿಳಿಸಲಿಚ್ಛಿಸುತ್ತೇನೆ.

ನಿಮ್ಮ ಬದುಕಿನಲ್ಲಿ ಹಾಗೂ ಸಮುದಾಯಗಳಲ್ಲಿ ಈ ಸಾಂಕ್ರಾಮಿಕ ಬಹಳ ಘೋರ ಸವಾಲುಗಳನ್ನು ಒಡ್ಡುತ್ತಿದೆ ಎಂದು ತಿಳಿದು ನನ್ನ ಅಂತಃಕರಣ ನಿಮಗಾಗಿ ಮರುಗುತ್ತಿದೆ. ಇಂತಹ ಪರೀಕ್ಷೆಗಳನ್ನು ಭಗವಂತ ಜಗತ್ತಿನ ಮೇಲೆ ಹೇರುವುದಿಲ್ಲ, ಬದಲಾಗಿ ಇದು ಜನಸಮುದಾಯದ ಸ್ವಯಂಕೃತ ಸಾಮೂಹಿಕ ಕರ್ಮದ ಕಣ್ಣಿಗೆ ಕಾಣದ ಸಂಚಿತ ಪ್ರಭಾವ. ಆದರೂ, ಭಗವಂತನ ಪ್ರೀತಿಯ ಮಕ್ಕಳಾಗಿ, ನಾವು ಎಷ್ಟೇ ಸಮಸ್ಯೆಗಳನ್ನೆದುರಿಸಲಿ, ನಾವು ಅವನೊಡನೆ ಶ್ರುತಿಗೂಡಿದರೆ, ಅವನ ಕಾಣದ ಕೈ ಹಾಗೂ ಪ್ರೇಮಪೂರಿತ ಉಪಸ್ಥಿತಿಯು ಸದಾ ನಮ್ಮೊಂದಿಗೆ ಇರುವುದನ್ನು ಕಾಣಬಹುದು. ಆಂತರಿಕ ಶಾಂತಿಯನ್ನು ಹಿಡಿದಿಟ್ಟುಕೊಂಡು ಹಾಗೂ ಭಗವಂತನ ಪ್ರೇಮ ಮತ್ತು ಶಕ್ತಿ ಈ ಪರೀಕ್ಷೆಯ ಸಮಯವನ್ನು ನಾವು ಹಾದು ಹೋಗುವಂತೆ ಮಾಡುತ್ತದೆ ಎಂದು ನಂಬಿ, ಈ ಸುಸ್ಥಿರ ಸತ್ಯವನ್ನು ಹಿಡಿದಿಟ್ಟುಕೊಳ್ಳಿ ಎಂದು ನಾನು ನಿಮಗೆ ಪ್ರೇರಿಸುತ್ತೇನೆ; ಏಕೆಂದರೆ, ಅವನೇ ನಮ್ಮ ರಕ್ಷಣೆಯ ಮಹಾನ್‌ ಆಶ್ರಯಧಾಮ  ಅಪಾಯದಿಂದ ಮೂಲಭೂತ ರಕ್ಷಣೆ ಹಾಗೂ ಉಪಶಮನದೆಡೆಗೆ ಕರೆದೊಯ್ಯುವ ನಿತ್ಯ ಮಾರ್ಗದರ್ಶಿ.

ನಿಮ್ಮ ಬಾಹ್ಯ ಸ್ಥಿರತೆ ಅಥವಾ ಯೋಗಕ್ಷೇಮಕ್ಕೆ ಧಕ್ಕೆ ತರುವ ಯಾವುದೇ ಪರಿಸ್ಥಿತಿಯನ್ನು ಎದುರಿಸಿದಾಗ, ನಮ್ಮೆಲ್ಲರ ಸರ್ವಶಕ್ತ ತಂದೆ/ತಾಯಿ ಇಲ್ಲಿ ಹಾಗೂ ಈಗ ನಮ್ಮೊಂದಿಗೆ ಇದ್ದಾನೆ/ಳೆ ಎಂಬ ಅರಿವನ್ನು ಪ್ರಜ್ಞಾಪೂರ್ವಕವಾಗಿ ತರುವ ಮೂಲಕ ಯಾವುದೇ ಭಯ ಅಥವಾ ಅಭದ್ರತೆಯನ್ನು ಎದುರಿಸಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ, ಜೊತೆಜೊತೆಗೇ ಗುರುದೇವ ಪರಮಹಂಸ ಯೋಗಾನಂದಜಿಯವರ ನುಡಿಗಳಲ್ಲಿ: “ನಾನು ಭಗವಂತನ ಸಾನ್ನಿಧ್ಯದಲ್ಲಿ ಭದ್ರವಾಗಿದ್ದೇನೆ. ಯಾವುದೇ ಹಾನಿ ನನ್ನನ್ನು ತಲುಪಲು ಸಾಧ್ಯವಿಲ್ಲ, ಏಕೆಂದರೆ ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲೂಶಾರೀರಿಕ, ಮಾನಸಿಕ, ಆರ್ಥಿಕ, ಆಧ್ಯಾತ್ಮಿಕಭಗವಂತನ ಸಾನ್ನಿಧ್ಯದ ಕೋಟೆಯಲ್ಲಿ ನಾನು ಸುರಕ್ಷಿತವಾಗಿದ್ದೇನೆ,” ಎಂದು ಮತ್ತೆ ಮತ್ತೆ ಪ್ರಬಲವಾಗಿ ದೃಢೀಕರಿಸಿ.

ಧ್ಯಾನ ನಮ್ಮ ಮಹಾನ್‌ ರಕ್ಷಣೆ, ಹಾಗೂ ಈ ಸಂದಿಗ್ಧ ಸಮಯದಲ್ಲಿ ನಮ್ಮ ಆತ್ಮಗಳನ್ನು ಜಯಿಸಲಾಗದಂತೆ ಹಾಗೂ ಸ್ಪರ್ಶಿಸಲಾರದಂತೆ ನೋಡಿಕೊಳ್ಳುವ ಮಹತ್ತರವಾದ ಭರವಸೆ. ನಾವು ನಮ್ಮ ಹೃದಯವನ್ನು ಭಗವಂತನಿಗೆ ತೆರೆದುಕೊಂಡಾಗಕ್ಷಣಮಾತ್ರವಾದರೂ ಸಹ, ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಅವನ ಉಪಶಮನಕಾರಿ ಪ್ರೇಮ ಹಾಗೂ ಸ್ಥಿರಗೊಳಿಸುವ ಜ್ಞಾನವು ನಮ್ಮನ್ನು ಶಾಂತಗೊಳಿಸುತ್ತದೆ ಮತ್ತು ಪೋಷಿಸುತ್ತದೆ, ಹಾಗೂ ಎಲ್ಲ ಸಂದೇಹ ಮತ್ತು ಅನಿಶ್ಚಿತತೆಗಳನ್ನು ಜಯಿಸಲು ನಮ್ಮ ಆಂತರಿಕ ಶಕ್ತಿಯನ್ನು ನವೀಕರಿಸುತ್ತದೆ ಹಾಗೂ ನಮ್ಮ ಪ್ರಜ್ಞೆಯನ್ನು ಉನ್ನತಗೊಳಿಸುತ್ತದೆ. ಈ ರೀತಿಯಲ್ಲಿ, ನಾವು ಎದುರಿಸುತ್ತಿರುವ ಪರಿಸ್ಥಿತಿಗಳಿಗೆ ಸರಿ ಹೊಂದುವಂತಹ ಕ್ರಮವನ್ನು ತೆಗೆದುಕೊಳ್ಳಲು ನಾವು ಸ್ಥೈರ್ಯ ಹಾಗೂ ಅಂತರ್ಬೋಧಿತ ನಿರ್ದೇಶನದಿಂದ ತುಂಬಿರುವುದನ್ನು ಕಾಣುತ್ತೇವೆ.

ಯಾವುದೇ ಸಂಕಷ್ಟವನ್ನು ಯಾವ ಉಚಿತ ದೃಷ್ಟಿಕೋನದಿಂದ ನಾವು ಎದುರಿಸಬೇಕೆಂಬುದನ್ನು ಗುರುಗಳು ನಮಗೆ ನೀಡುತ್ತಾರೆ:

“ನಕಾರಾತ್ಮಕ ಪರಿಸ್ಥಿತಿಗಳ ಮಧ್ಯದಲ್ಲಿ, ಒಂದು ಧನಾತ್ಮಕ, ಸೃಜನಶೀಲ ರೀತಿಯಲ್ಲಿ ಆಲೋಚಿಸುತ್ತಾ ಮತ್ತು ಕ್ರಿಯಾಶೀಲರಾಗುತ್ತಾ “ವಿರುದ್ಧವಾದುದನ್ನು” ಅಭ್ಯಾಸ ಮಾಡಿ. ತಿತಿಕ್ಷೆಯನ್ನು ಅಭ್ಯಾಸ ಮಾಡಿ, ಅದರ ಅರ್ಥ ಅಹಿತಕರ ಅನುಭವಗಳಿಗೆ ಎಡೆಮಾಡಿಕೊಡಬೇಡಿ, ಬದಲಾಗಿ ಮಾನಸಿಕವಾಗಿ ಕ್ಷೋಭೆಗೊಳ್ಳದೆ ಅವನ್ನು ಎದುರಿಸಿ. ಅನಾರೋಗ್ಯವುಂಟಾದಾಗ, ನಿಮ್ಮ ಮನಸ್ಸು ವ್ಯಾಕುಲಗೊಳ್ಳಲು ಬಿಡದೆ ಜೀವನದ ನೈರ್ಮಲ್ಯದ ನಿಯಮಗಳನ್ನು ಪಾಲಿಸಿ. ನೀವು ಮಾಡುವ ಎಲ್ಲದರಲ್ಲೂ ಕ್ಷೋಭೆಗೊಳ್ಳದಂತಿರಿ.”

ಪ್ರೀತಿಪಾತ್ರರೇ, ಭರವಸೆಯಿರಲಿ, ಭಾರತದಲ್ಲಿಯ ಹಾಗೂ ಪ್ರಪಂಚದ ನೀವು ಪ್ರತಿಯೊಬ್ಬರಿಗೂ ಉಪಶಮನಕಾರಿ ಬೆಳಕು ಹಾಗೂ ಸ್ಫೂರ್ತಿಯ ಪ್ರೇಮ ತುಂಬಿದ ಭಾವನೆಗಳನ್ನು ಕಳಿಸಲು ಗುರುದೇವರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಆಶ್ರಮಗಳ ಎಲ್ಲ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ನನ್ನೊಂದಿಗೆ ಆಳವಾದ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಾರೆ. ಯಾರಿಗೆಲ್ಲಾ ಭಗವಂತನ ಅನುಗ್ರಹ ಹಾಗೂ ಅಶೀರ್ವಾದದ ಅವಶ್ಯಕತೆಯಿದೆಯೋ ಅವರಿಗೆ ಉಪಶಮನಕಾರಿ ಸ್ಪಂದನಗಳನ್ನು ಕಳುಹಿಸಲು ನಮ್ಮ ಪ್ರಾರ್ಥನೆಗಳೊಂದಿಗೆ ನಿಮ್ಮದನ್ನೂ ಸೇರಿಸುವುದನ್ನು ದಯವಿಟ್ಟು ಮುಂದುವರೆಸಿರಿ. ಒಬ್ಬರಿಗೊಬ್ಬರು ಸಹಾಯ ಮಾಡುವುದರಿಂದ, ನಮ್ಮ ಪ್ರಶಾಂತ ಉದಾಹರಣೆಯಿಂದ ನಮ್ಮ ಸುತ್ತಲಿರುವವರನ್ನು ಉದ್ಧಾರ ಮಾಡುವುದರಿಂದ, ಹಾಗೂ ಬಲ ಮತ್ತು ಧೈರ್ಯದ ಅನಂತ ಆಕರದಿಂದ ನಮ್ಮನ್ನು ನಾವು ಸಂಪೂರಿತಗೊಳಿಸಿಕೊಳ್ಳುವುದರಿಂದ, ಒಟ್ಟುಗೂಡಿ ನಾವೆಲ್ಲ ಈ ಕಠಿಣ ಸಮಯದಲ್ಲಿ ಜಯಶಾಲಿಯಾಗಿ ಹೊರಬರುತ್ತೇವೆ.

ಭಗವಂತ ಹಾಗೂ ಗುರುಗಳು ನಿಮ್ಮನ್ನು ಆಶೀರ್ವದಿಸಲಿ, ಮುನ್ನಡೆಸಲಿ, ಹಾಗೂ ನಿಮ್ಮ ಹಾಗೂ ನಿಮ್ಮ ಕುಟುಂಬಗಳನ್ನು ನೋಡಿಕೊಳ್ಳಲಿ,

ಸ್ವಾಮಿ ಚಿದಾನಂದ ಗಿರಿ

Share this on